ಸೂಚನೆ: (ಭಾನುವಾರ (ಆ.26) ಶ್ರೀರಾಮ ಸೇತು ಉಳಿಸಿ ಆಂದೋಲನದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ರಾಮೇಶ್ವರದಲ್ಲಿ ದೇಶಾದ್ಯಂತದಿಂದ ಶ್ರದ್ಧಾಳುಗಳು ಸಮಾವೇಶಗೊಳ್ಳುತ್ತಿದ್ದಾರೆ. ಈ ಪ್ರಯುಕ್ತ ಇದು ಪ್ರಸ್ತುತ)
ಶ್ರೀ ರಾಮ ಸೇತು ಉಳಿಸಿ ಆಂದೋಲನದ
ನೇತೃತ್ವ ನನ್ನದಲ್ಲ: ಪೇಜಾವರ ಸ್ವಾಮೀಜಿ
ಸಂದರ್ಶನ: ಅವಿನಾಶ್ ಬಿ.
ಚೆನ್ನೈ, ಆ.25- ತ್ರೇತಾ ಯುಗದಲ್ಲಿ ಶ್ರೀ ರಾಮನು ವಾನರಸೈನ್ಯದ ನೆರವಿನಿಂದ ನಿರ್ಮಿಸಿದನೆಂಬ ಪ್ರತೀತಿ ಇರುವ, ಭಾರತ-ಶ್ರೀಲಂಕಾವನ್ನು ಸಂಪರ್ಕಿಸುವ ಶ್ರೀ ರಾಮ ಸೇತುವೆ ಈಗ ದೇಶದ ಉದ್ದಗಲಕ್ಕೂ ಚರ್ಚೆಯ ವಸ್ತು. "ಸೇತು ಸಮುದ್ರಂ" ಎಂಬ, ಭಾರತದ ಪಶ್ಚಿಮ ಕರಾವಳಿ ಮತ್ತು ಪೂರ್ವ ಕರಾವಳಿಯ ಬಂದರು ನಗರಿಗಳನ್ನು ಸಂಪರ್ಕಿಸುವ ಜಲಮಾರ್ಗದ ದೂರವನ್ನು ಕಡಿಮೆಗೊಳಿಸುವ ಯೋಜನೆಗಾಗಿ ಇದೀಗ ಈ ಸೇತುವೆ ಅವಸಾನದ ಅಂಚಿನಲ್ಲಿದೆ. (ಈಗ ಭಾರತದ ಪೂರ್ವಭಾಗದಿಂದ ಆಗಮಿಸುವ ಹಡಗುಗಳು ಶ್ರೀಲಂಕಾಕ್ಕೆ ಒಂದು ಸುತ್ತು ಬಂದು ಮುಂದುವರಿಯಬೇಕಾಗುತ್ತದೆ. ಈ ಸೇತುವೆ ಕೆಡವಿ ಅಲ್ಲಿ ಜಲಮಾರ್ಗ ರಚಿಸಿದಲ್ಲಿ 780 ಕಿ.ಮೀ. (30 ಗಂಟೆ) ಉಳಿತಾಯವಾಗುತ್ತದೆ ಎಂಬುದು ಸೇತು ಸಮುದ್ರಂ ಯೋಜನೆಯ ಸಾರಾಂಶ.) ಧಾರ್ಮಿಕ ಶ್ರದ್ಧಾಳುಗಳು, ಇದು ನಮ್ಮ ವೈಭವೋಪೇತ ಪುರಾಣ ಕಥನದ ಸಾಕ್ಷ್ಯ ಎನ್ನುತ್ತಾ ಅದನ್ನು ಉಳಿಸಿಕೊಳ್ಳಲು ಪಣ ತೊಟ್ಟಿದ್ದಾರೆ. ಕೇಂದ್ರ ಸರಕಾರ ಇದು ಮಾನವ ನಿರ್ಮಿತ ಅಲ್ಲ, ಪ್ರಕೃತಿ ನಿರ್ಮಿತ ಎಂದು ಹೇಳುತ್ತಿದ್ದರೆ, ಇದು ವಾನರ ಸೇನೆಯ ಶ್ರೀರಾಮ ಭಕ್ತಿಯ ಉತ್ತುಂಗದ ಪ್ರತೀಕ ಎನ್ನುತ್ತಾ ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ ವಿಶ್ವ ಹಿಂದೂ ಪರಿಷತ್ ನೇತೃತ್ವದ ಹಿಂದೂ ಸಮಾಜ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸೇತುವೆಯ ರಕ್ಷಣೆಗಾಗಿ ಸಂಘಟನೆಗಳು ಹುಟ್ಟಿಕೊಂಡು ಕಾರ್ಯಬದ್ಧವಾಗಿವೆ. ಪ್ರತಿಭಟನೆಯ ಕಹಳೆ ಮೊಳಗಿದೆ. ದೇಶದೆಲ್ಲೆಡೆ ಆಗಸ್ಟ್ 12ರ ಆಷಾಢ ಅಮಾವಾಸ್ಯೆಯಂದು ಸಾಮೂಹಿಕ ಉಪವಾಸ ನಡೆಸಿ ಸತ್ಯ-ಆಗ್ರಹಕ್ಕೆ ಚಾಲನೆ ನೀಡಿದ್ದರೆ, ಇಂದು (ಆ.26) "ರಾಮೇಶ್ವರ ಚಲೋ" ಅಭಿಯಾನದ ಅಂಗವಾಗಿ ಲಕ್ಷಾಂತರ ಮಂದಿ ರಾಮೇಶ್ವರದಲ್ಲಿ ಜಮಾಯಿಸಿ, ಸರಕಾರ ನಮ್ಮ ಭಾವನೆಗಳಿಗೂ ಬೆಲೆ ನೀಡಲಿ ಎಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ತಮಿಳುನಾಡು ರಾಜಧಾನಿ ಚೆನ್ನೈಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಮಾತನಾಡಿಸಿದಾಗ ಪ್ರತಿಭಟನೆಯ ವ್ಯಾಪಕತೆ, ಕೇಂದ್ರ ಸರಕಾರದ ನಿಲುವುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಗೆಡಹಿದರು. ಅವರೊಂದಿಗೆ ನಡೆಸಿದ ಸಂದರ್ಶನದ ಸಾರಾಂಶ:
ಪ್ರ: ಶ್ರೀ ರಾಮ ಸೇತು ರಕ್ಷಣಾ ಆಂದೋಲನದ ಅಭಿಯಾನದಲ್ಲಿ ನಿಮ್ಮ ನಿಲುವೇನು, ಅದು ಯಾವ ಹಂತದಲ್ಲಿದೆ?
ಸ್ವಾಮೀಜಿ: ನಮ್ಮೆಲ್ಲರ ನಂಬಿಕೆಯ, ಪರಂಪರೆಯ ಪ್ರತೀಕವಾಗಿರುವ ರಾಮ ಸೇತುವಿನ ರಕ್ಷಣೆಗಾಗಿ ದೇಶಾದ್ಯಂತ ಆಂದೋಲನ ನಡೆಯುತ್ತಿದೆ. ಆದರೆ ಈ ಚಳವಳಿಗೆ ನಾನು ನೇತೃತ್ವ ವಹಿಸುತ್ತಿಲ್ಲ. ನನ್ನ ಬೆಂಬಲ ಮಾತ್ರ ಇದೆ. ಸೇತುವೆಯ ರಕ್ಷಣೆಗೆ ರಚಿಸಲಾದ ಸಮಿತಿಯಲ್ಲಿ ನಾನೂ ಒಬ್ಬ ಸದಸ್ಯ. ವಿಶ್ವ ಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳು ಕಾರ್ಯಕ್ರಮ ನಡೆಸುತ್ತಿವೆ. ನಾನೂ ಅದರಲ್ಲಿ ಭಾಗಿಯಾಗುತ್ತಿದ್ದೇನೆ.
ಪ್ರ: ಶ್ರೀರಾಮ ಸೇತು ವಿಪತ್ತಿನಲ್ಲಿದೆ. ಈ ಬಗ್ಗೆ ಕೇಂದ್ರ ಸರಕಾರದ ನಿಲುವಿನ ಬಗ್ಗೆ ಏನು ಹೇಳುತ್ತೀರಿ?
ಸ್ವಾಮೀಜಿ: ಕೋಟ್ಯಂತರ ಜನರು ಶತಶತಮಾನಗಳಿಂದ ಇದನ್ನು ಶ್ರೀರಾಮ ಸೇತು ಅಂತ ಒಪ್ಪಿಕೊಂಡುಬಿಟ್ಟಿದ್ದಾರೆ. ಸರಕಾರ ತಾನು ಸೆಕ್ಯುಲರ್ ಎಂದು ಹೇಳಿಕೊಳ್ಳುತ್ತಾ, ದೇವರಿದ್ದಾನೆ ಎಂಬುದನ್ನು ನಂಬದಿರಬಹುದು. ಇಷ್ಟೊಂದು ಜನ ಇದನ್ನು ಒಪ್ಪಿರುವಾಗ, ಈ ಸೇತುವೆ ಪ್ರಕೃತಿ ನಿರ್ಮಿತವಾದುದು, ಮಾನವ ನಿರ್ಮಿತ ಅಲ್ಲ ಎಂದೆಲ್ಲಾ ಸರಕಾರ ಹಠ ಹಿಡಿಯುತ್ತಿದೆ. ಇದು ಸಲ್ಲದು. ದೇವರ ಮೇಲೆ ವಿಶ್ವಾಸವಿಲ್ಲ ಎಂದಾಕ್ಷಣ ಮಂದಿರ, ಮಸೀದಿ, ಚರ್ಚ್ ಇತ್ಯಾದಿಗಳನ್ನು ಭಗ್ನಗೊಳಿಸಿ ಅಲ್ಲಿ ಕೈಗಾರಿಕೆ ಸ್ಥಾಪಿಸುವುದು ಸರಿಯಲ್ಲ. ಲಕ್ಷಾಂತರ ಮಂದಿಯ ನಂಬಿಕೆಯ ಪ್ರಶ್ನೆಯಿದು. ಎಲ್ಲರ ಭಾವನೆಗಳಿಗೆ ಬೆಲೆ ಕೊಡಬೇಕಾದದ್ದು ಸರಕಾರದ ಕರ್ತವ್ಯ.
ಪ್ರ: ಇದೊಂದು "ಅಲಿ ಸೇತುವೆ" ಆಗಿದ್ದಿದ್ದರೆ ಸರಕಾರ ಈ ರೀತಿಯ ಕ್ರಮಕ್ಕೆ ಮುಂದಾಗುತ್ತಿತ್ತೇ ಅಂತ ತೊಗಾಡಿಯಾ ಕೇಳಿದ್ದಾರೆ. ಅಂತೆಯೇ ಮಸೀದಿಗಳನ್ನು, ಚರ್ಚ್‌ಗಳನ್ನು ಉಳಿಸಲು ದೆಹಲಿಯ ಮೆಟ್ರೋ ರೈಲಿನ ಮಾರ್ಗ ಬದಲಿಸಿದ್ದಾರೆ ಅಂತಲೂ ಹೇಳಿದ್ದಾರೆ. ಅದರ ಬಗ್ಗೆ ಏನು ಹೇಳುವಿರಿ?
ಸ್ವಾಮೀಜಿ: ಕೇಂದ್ರ ಸರಕಾರವು ಬಹುಸಂಖ್ಯಾತರ ಭಾವನೆಗಳಿಗೂ ಬೆಲೆ ನೀಡಬೇಕು. ಅಲ್ಪಸಂಖ್ಯಾತರಂತೆಯೇ ಬಹುಸಂಖ್ಯಾತರನ್ನೂ ಸಮಾನವಾಗಿ ಕಾಣಬೇಕು. ಆದರೆ ಈಗ ಅದು ಆಗುತ್ತಿಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣ ಆಗುತ್ತಿದೆ. ಅವರಿಗೆ ಆರ್ಥಿಕ ಸಬಲೀಕರಣ, ಮೀಸಲಾತಿ ಹೆಸರಿನಲ್ಲಿ ಆದ್ಯತೆ ನೀಡಲಾಗುತ್ತಿದೆ. ಈ ರೀತಿ ಮಾಡಬಾರದು. ಸರಕಾರ ದೇಶದಲ್ಲಿರುವ ಎಲ್ಲರನ್ನೂ ಸಮಾನವಾಗಿ ಕಾಣಲಿ ಮತ್ತು ಹಿಂದುಳಿದವರನ್ನು ಗುರುತಿಸಿ ಮೇಲೆತ್ತುವ ಕೆಲಸ ಮಾಡಲಿ.
ಈ ರೀತಿಯ ತುಷ್ಟೀಕರಣ ತಡೆಯುವಂತಾಗಲು ಬಹುಸಂಖ್ಯಾತರಲ್ಲೂ ಓಟುಗಳ ಕ್ರೋಡೀಕರಣ ಆಗಬೇಕು. ಅದು ಆಗದಿರುವುದೇ ಎಲ್ಲಾ ಸಮಸ್ಯೆಗಳಿಗೆ ಕಾರಣ. ಮುಸಲ್ಮಾನರಂತೆಯೇ ಹಿಂದೂ ಓಟುಗಳ ಕ್ರೋಡೀಕರಣ ಆದಲ್ಲಿ ಅವರ ಓಲೈಕೆ ನಿಲ್ಲುತ್ತದೆ. ಮತ್ತು ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡುವಂತಾಗುತ್ತದೆ.
ಪ್ರ: ಹಾಗಿದ್ದರೆ ಬಹುಸಂಖ್ಯಾತರ ಈ ಸ್ಥಿತಿಗೆ ಕಾರಣ ಏನು?
ಸ್ವಾಮೀಜಿ: ಸಂಘಟನೆ ಆಗದಿರುವುದೇ ಪ್ರಮುಖ ತೊಡಕು. ಇದಕ್ಕೆ ಪ್ರಧಾನ ಕಾರಣವೆಂದರೆ ಜಾತಿ ಜಾತಿ ಎನ್ನುತ್ತಾ ನಾವು ಒಗ್ಗಟ್ಟು ಪ್ರದರ್ಶಿಸದಿರುವುದು.
ಪ್ರ: ಕರ್ನಾಟಕ ರಾಜಕೀಯ ಈಗ ಒಡೆದ ಮನೆಯಂತೆ ತೋರುತ್ತಿದೆ. ಇದರ ಬಗ್ಗೆ ಏನು ಹೇಳಲು ಬಯಸುತ್ತೀರಿ?
ಸ್ವಾಮೀಜಿ: ರಾಜ್ಯ ರಾಜಕೀಯ ಬಗ್ಗೆ ಏನೂ ಹೇಳಲು ಇಚ್ಛಿಸುವುದಿಲ್ಲ. ಆದರೆ ಒಪ್ಪಂದಕ್ಕೆ ಬದ್ಧರಾಗಿರಬೇಕಾದದು ಯಾವುದೇ ಪಕ್ಷದ ಕರ್ತವ್ಯ. ಜನರಿಗೆ ಇಷ್ಟು ಬೇಗ ಚುನಾವಣೆಗಳು ಬೇಕಿಲ್ಲ. ಚುನಾವಣೆ ಆಗದಂತೆ ನೋಡಿಕೊಳ್ಳಬೇಕು. ರಾಜಕೀಯದಲ್ಲೂ ಮಾತಿಗೆ ಬದ್ಧತೆ ಇರಬೇಕು. ಹಾಗಿದ್ದಲ್ಲಿ ಮಾತ್ರವೇ ಜನರಿಗೆ ರಾಜಕೀಯದ ಮೇಲೆ ಭರವಸೆ ಮೂಡಲು ಸಾಧ್ಯ.
ಪ್ರ: ಮತ್ತೊಂದು ವಿಷಯ. ಅಯೋಧ್ಯೆ ರಾಮ ಮಂದಿರ. ಅದರ ಸದ್ದು ಕೇಳಿಸುತ್ತಿಲ್ಲವಲ್ಲ?
ಸ್ವಾಮೀಜಿ: ಅದೀಗ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದ ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ.
ಪ್ರ: ಇನ್ನೊಂದು ಜನರಿಗೆ ಕುತೂಹಲ ಇರುವ ಸಂಗತಿ ಎಂದರೆ ಈ ಬಾರಿಯ ಉಡುಪಿ ಪರ್ಯಾಯ. ಸಾಗರೋಲ್ಲಂಘನ ಮಾಡಿದ ಪುತ್ತಿಗೆ ಸ್ವಾಮೀಜಿಗಳಿಗೆ ಪೂಜಾ ಕೈಂಕರ್ಯ ದೊರೆಯುತ್ತದೆಯೇ?
ಸ್ವಾಮೀಜಿ: ಈ ಬಗ್ಗೆ ಸಂದರ್ಭಾನುಸಾರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಹೆಚ್ಚೇನು ಈಗ ಹೇಳಲಾಗದು.





















